ಸೇವಾ ಮನಸಿನ ಬಂಧುಗಳೇ,
"ಜನಸೇವೆಯೇ ಜನಾರ್ದನ ಸೇವೆ" ಎನ್ನುವ ಶ್ರೇಷ್ಠ ಆಶಯ ಮತ್ತು ಧ್ಯೇಯೋದ್ದೇಶಗಳೊಂದಿಗೆ, ಅಶಕ್ತರು ಮತ್ತು ಆರ್ಥಿಕವಾಗಿ ಸಬಲರಲ್ಲದವರ ಬಾಳಿನಲ್ಲಿ ಬೆಳಕು ಮತ್ತು ಮೊಗದಲ್ಲಿ ನಗು ತರುವ ಸದುದ್ದೇಶದಿಂದ ಜನುಮ ತಾಳಿದ ಜನಸೇವಾ ಚಾರಿಟೇಬಲ್ ಅಸೋಸಿಯೇಷನ್'ಗೆ ಇನ್ನು ಕೆಲವು ತಿಂಗಳುಗಳಲ್ಲಿ ಐದರ ಸಂಭ್ರಮ! ಬಹುಜನ ಸಹೃದಯಿ ಬಂಧುಗಳ ಸಹಾಯ-ಸಹಕಾರದ ದ್ಯೋತಕವಾಗಿ, ಸಮಾಜದ ಆರೋಗ್ಯ ಮತ್ತು ಶಿಕ್ಷಣದ ಅವಶ್ಯಕತೆಗೆ ಕಳೆದ ನಾಲ್ಕು ವರ್ಷ ಏಳು ತಿಂಗಳಲ್ಲಿ ಜನಸೇವಾ ಸಂಸ್ಥೆ ನೇರವಾಗಿ ಮತ್ತು ಪರೋಕ್ಷವಾಗಿ ವಿನಿಯೋಗಿಸಿದ ಮೊತ್ತ 52 ಲಕ್ಷದಷ್ಟು ರೂಪಾಯಿಗಳು! ಜೊತೆಗೆ ಸಂಸ್ಥೆಯ ಸಕ್ರಿಯ ಸದಸ್ಯರ ದೇಣಿಗೆಯ ಭಾಗವಾಗಿ 50 ಲಕ್ಷ ರೂಪಾಯಿ ನಿರಖು ಠೇವಣಿಯನ್ನು ಹೊಂದಿದೆ. ಜನ್ಮತಾಳಿದ 55 ತಿಂಗಳುಗಳಲ್ಲಿ ಒಟ್ಟುಗೂಡಿದ ಮೊತ್ತ ಒಂದು ಕೋಟಿ ಎರಡು ಲಕ್ಷ ರೂಪಾಯಿಗಳು! ಇದು ಸಾಧ್ಯವಾದದ್ದು ನಿಮ್ಮೆಲ್ಲರ ಪ್ರೀತಿಪೂರ್ವಕ ದೇಣಿಗೆ, ಸಹಾಯ ಮತ್ತು ನಿರಂತರ ಸಹಕಾರದಿಂದ - ಶರಣು ಶರಣಾರ್ಥಿಗಳು.
ಸಮಾಜಮುಖಿ ಚಿಂತನೆಯ ಮುಂದಿನ ಹಂತದ ಭಾಗವಾಗಿ, ಹೊಸ ಪರಿಕಲ್ಪನೆ ಮತ್ತು ಯೋಜನೆಯ ವಿವರಗಳನ್ನು ನಿಮ್ಮೆದುರು ಪ್ರಸ್ತುತಪಡಿಸಲು ಸಂತಸವಾಗುತ್ತಿದೆ.
ಸಮುದಾಯದ ಮತ್ತೊಂದು ಅಗತ್ಯ ಸೇವೆಯಾದ ಹಿರಿಯರ ಮನೆ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಬುದ್ಧ-ಮೊದಲ ಹೆಜ್ಜೆಯನ್ನು ಇಟ್ಟಿದ್ದೇವೆ. ಎರಡು ಎಕರೆ ಜಾಗವನ್ನು ಈ ಯೋಜನೆಗಾಗಿ ಜನಸೇವಾ ಸಂಸ್ಥೆಗೆ ಶ್ರೀಮತಿ ಇಂದಿರಾ ಕೆ ಪಿ (ದಿ. ನಾರಾಯಣ ಭಟ್ ಬೇಂದ್ರೋಡು ಇವರ ಧರ್ಮಪತ್ನಿ) ಉದಾರವಾಗಿ ದಾನ ನೀಡಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ. ಇವರ ಸೇವಾ ಮನೋಭಾವ, ಅಶಕ್ತರಿಗೆ ನೆರವಾಗುವ ವಿಶಾಲ ಮತ್ತು ನಿಷ್ಕಲ್ಮಶ ಹೃದಯ ತಲೆಮಾರುಗಳಿಗೆ ಮಾದರಿ. ಜನಸೇವಾ ಮತ್ತು ಇಂದಿರಕ್ಕನವರ ನಡುವಿನ ಈ ಬಾಂಧವ್ಯದ ಸುಕಾರ್ಯವನ್ನು ಸಾಕಾರಗೊಳಿಸಲು ನಮ್ಮೊಂದಿಗೆ ಸಹಕರಿಸಿದ ಶ್ರೀಮತಿ ಮತ್ತು ಶ್ರೀಯುತ ಜನಾರ್ದನ ಭಟ್ ತೈರೆ ಇವರ ಸೇವೆ-ಸಹಕಾರವನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
ಇಂದಿರಕ್ಕನವರಿಂದ ಉಡುಗೊರೆಯಾಗಿ ಪಡೆದ ಈ ಎರಡು ಎಕರೆ ಜಾಗದಲ್ಲಿ ಹಿರಿಯರ ಮನೆ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಸಾಕಾರಗೊಳಿಸುವ ಯೋಚನೆ ನಮ್ಮದು. ಆ ನಿಟ್ಟಿನಲ್ಲಿ ನುರಿತ ತಂಡದೊಂದಿಗೆ ಜನಸೇವಾ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಈಗಾಗಲೇ ಜಾಗವನ್ನು ಸ್ವಚ್ಛಗೊಳಿಸಿ ಮುಂದಿನ ಯೋಜನೆ ಪ್ರಗತಿಯಲ್ಲಿದೆ.
ಹಿರಿಯರ ಮನೆ ಮೊದಲ ಹಂತದ ಯೋಜನೆಯ ಅಂದಾಜು ವೆಚ್ಚ ಎರಡು ಕೋಟಿ ರೂಪಾಯಿಗಳು. ಹೆಚ್ಚಿನ, ಮಾಹಿತಿಪೂರ್ಣ ಪರಿಕಲ್ಪನೆ ಮತ್ತು ವಿವರಗಳೊಂದಿಗೆ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದ್ದೇವೆ.
ನಿಮ್ಮ ಸಹಾಯ, ಸಹಕಾರ, ದೇಣಿಗೆ, ಪ್ರೀತಿ, ವಿಶ್ವಾಸ, ಆಶೀರ್ವಾದ ಸದಾ ಹೀಗೆಯೇ ನಿರಂತರವಾಗಿ ನಮ್ಮೊಂದಿಗೆ ಇರಲಿ.
ಸರ್ವಜೀವ ಸಮೃದ್ಧಿಗನುಗೂಡಿ ದುಡಿಯುತಿರೆ ಪರ್ವವಂದಿಳೆಗೆಲವೊ – ಮಂಕುತಿಮ್ಮ
(ವಾಚ್ಯಾರ್ಥ: ಸರ್ವ ಜೀವಗಳ ಸಮೃದ್ಧಿಗೆ ಸಹಕಾರಿಯಾಗುವಂತೆ ದುಡಿದರೆ, ಅದೇ ಬದಲಾವಣೆಯ ಪರ್ವ.)
ವಂದನೆಗಳು, ನನ್ನಿ. 🙏🏻
ನಮ್ಮೊಂದಿಗೆ ಕೈ ಜೋಡಿಸಲು/ ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ:
https://janaseva.in/
📱ನಾಗರಾಜ ಉಪ್ಪಂಗಳ (9535000365)
📱ಪಾಂಡುರಂಗ ಗುರ್ಜರ್ (9342281752)
📱ರವೀ ಸಜಂಗದ್ದೆ (9731002275)